ಪೋಷಕತ್ವ -
 	ಅಪ್ರಾಪ್ತ ವಯಸ್ಕ, (ಹದಿನೆಂಟು ವರ್ಷ ತುಂಬದ) ವ್ಯಕ್ತಿಯ ಅಥವಾ ಆತನ ಸ್ವತ್ತಿನ ರಕ್ಷಣೆ ಮತ್ತು ನಿರ್ವಹಣೆಗಾಗಿ ಮಾಡಲಾದ ವ್ಯವಸ್ಥೆ (ಗಾರ್ಡಿಯನ್‍ಷಿಪ್) ಈ ಜವಾಬ್ದಾರಿಯನ್ನು ನಿರ್ವಹಿಸುವವನು ಪೋಷಕ, ಪಾಲಕ ಅಥವಾ ಸಂರಕ್ಷಕನೆನಿಸಿಕೊಳ್ಳುತ್ತಾನೆ. ಪ್ರತಿಯೊಬ್ಬ ಅಪ್ರಾಪ್ತ ವಯಸ್ಕ ವ್ಯಕ್ತಿಗೂ ಪೋಷಕ ಇರಬೇಕು. ಅಪ್ರಾಪ್ತ ವಯಸ್ಕ ವ್ಯಕ್ತಿ ಸ್ವತಃ ಯಾವ ಕರಾರನ್ನೂ ಮಾಡಿಕೊಳ್ಳಲು ಅರ್ಹನಲ್ಲ. ಅಂಥ ವ್ಯಕ್ತಿ ಪಾಲುದಾರಿಕೆ ಸಂಸ್ಥೆಯ ಪಾಲುದಾರನಾಗಲಾರ. ಇನ್ನೊಬ್ಬ ಅಪ್ರಾಪ್ತ ವಯಸ್ಕನ ಪೋಷಕನಾಗಲಾರ. ಅಪ್ರಾಪ್ತ ವಯಸ್ಕನ ಪರವಾಗಿ ಆ ವ್ಯಕ್ತಿಯ ಪೋಷಕನೇ ಎಲ್ಲ ವ್ಯವಹಾರಗಳನ್ನೂ ಮಾಡಬೇಕಾಗುತ್ತದೆ.

 	ಅಪ್ರಾಪ್ತ ವಯಸ್ಕನ ತಂದೆ, ತಾಯಿ, ಆ ತಂದೆಯ ಅಥವಾ ತಾಯಿಯ ಉಯಿಲಿನಲ್ಲಿ ಪೋಷಕನಾಗಿ ನೇಮಕ ಮಾಡಲಾದ ವ್ಯಕ್ತಿ, ನ್ಯಾಯಾಲಯದಿಂದ ಪೋಷಕನಾಗಿ ನೇಮಕಗೊಂಡ ವ್ಯಕ್ತಿ ಯಾವುದಾದರೂ ಅಧಿನಿಯಮದ ಮೇಲೆ ಪೋಷಕನಾಗಿ ನೇಮಕಗೊಳ್ಳುವ ವ್ಯಕ್ತಿ-ಇವರು ಪೋಷಕತ್ವಕ್ಕೆ ಅರ್ಹರು. ಅಪ್ರಾಪ್ತ ವಯಸ್ಕ ಹಿಂದೂ ಹುಡುಗನಿಗೆ ಅವಿವಾಹಿತ ಹುಡುಗಿಗೆ ತಂದೆಯೇ ಪೋಷಕ ಅವನ ಕಾಲಾನಂತರ ತಾಯಿ ಪೋಷಕಿಯಾಗುತ್ತಾಳೆ. ಆದರೆ, ಏಳು ವರ್ಷ ಪ್ರಾಯ ತುಂಬದ ಮಗುವಿನ ದೈಹಿಕ ಜವಾಬ್ದಾರಿ ಅದರ ತಾಯಿಯದೇ ಆಗಿರುತ್ತದೆ. ಹುಡುಗಿಗೆ ವಿವಾಹವಾಗಿದ್ದರೆ ಅವಳ ಗಂಡ ಅವಳ ಪೋಷಕನಾಗುತ್ತಾನೆ. ದತ್ತುವಾದ ಅಪ್ರಾಪ್ತ ವಯಸ್ಕನ ಹುಡುಗನ ಅಥವಾ ಹುಡುಗಿಯ ಪೋಷಕತ್ವ ದತ್ತು ತೆಗೆದುಕೊಂಡ ತಂದೆಯದಾಗಿರುತ್ತದೆ. ಅವನ ಅನಂತರ ಅವನ ಹೆಂಡತಿ ಪೋಷಕತ್ವ ವಹಿಸುತ್ತಾಳೆ.
 
	ಹಿಂದೂ ಅಲ್ಲದವನು ವಾನಪ್ರಸ್ಥ ಸ್ವೀಕರಿಸಿದವನು, ಯತಿ, ಸಂನ್ಯಾಸಿ, ಪೋಷಕರಾಗಲಾರರು. ಚಿಕ್ಕಪ್ಪ, ಚಿಕ್ಕಮ್ಮ ಸ್ವಾಭಾವಿಕ ಪೋಷಕರೆನಿಸರು.

	ಪೋಷಕನಾದವನು ಅಪ್ರಾಪ್ತ ವಯಸ್ಕನ ಆಸ್ತಿಯ ವಿಕ್ರಯ, ಭೋಗ್ಯಾಧಾರ ಮುಂತಾದ ರೀತಿಯಲ್ಲಿ ಪರಾಧೀನ ಪಡಿಸಬೇಕಾದರೆ ನ್ಯಾಯಾಲಯದ ಆದೇಶ ಪಡೆಯಬೇಕು. ಅಂಥ ಪರಭಾರೆ ಅಪ್ರಾಪ್ತ ವಯಸ್ಕನ ಹಿತದೃಷ್ಟಿಯಿಂದ ಉತ್ತಮವಾದ್ದಾಗಿದೆಯೆಂದೂ ಅದು ಅವಶ್ಯವೆಂದೂ ನ್ಯಾಯಾಲಯಕ್ಕೆ ಮನವರಿಕೆ ಮಾಡಿಕೊಟ್ಟಲ್ಲಿ ಮಾತ್ರ ನ್ಯಾಯಾಲಯ ಅಂಥ ಸ್ವತ್ತಿನ ಪರಭಾರೆಯ ಬಗ್ಗೆ ಆದೇಶ ಹೊರಡಿಸುತ್ತದೆ. 

	ಅಪ್ರಾಪ್ತ ವಯಸ್ಕನಿಗೆ ಪೋಷಕನನ್ನು ನೇಮಿಸುವ ವಿಚಾರದಲ್ಲಿ ಆ ಅಪ್ರಾಪ್ತ ವಯಸ್ಕನ ಹಿತವೇ ಪ್ರಮುಖ ಅಂಶವಾಗಿರುತ್ತದೆ. ಆತನ ಹಿತಕ್ಕೆ ವಿರುದ್ಧವಾದ ಕೃತ್ಯಕ್ಕೆ ಪೋಷಕನೇ ವೈಯಕ್ತಿಕವಾಗಿ ಹೊಣೆಗಾರನಾಗುತ್ತಾನೆ. ಆದರೆ, ಅಪ್ರಾಪ್ತ ವಯಸ್ಕ ಪಾಲುದಾರಿಕೆ ಸಂಸ್ಥೆಯ ಪ್ರಯೋಜನಗಳಿಗೆ ಸೇರ್ಪಡೆಯಾಗಬಹುದು.

	ಅಪ್ರಾಪ್ತ ವಯಸ್ಕನಿಗೆ ಬೇಕಾದ ಅಗತ್ಯವಸ್ತುಗಳನ್ನು ನೀಡಿದಾಗ, ಆತನ ಸ್ವತ್ತಿನಿಂದ ಅವುಗಳ ಬೆಲೆಯನ್ನು ಪಡೆಯಬಹುದು.

	ಪೋಷಕತ್ವ ಈ ಕೆಳಕಂಡ ಸನ್ನಿವೇಶಗಳಲ್ಲಿ ಅಂತ್ಯಗೊಳ್ಳುತ್ತದೆ.

	1. ಪೋಷಕ ಸತ್ತಾಗ, ವಜಾಗೊಂಡಾಗ ಅಥವಾ ಸೇವೆಯಿಂದ ನಿರ್ಗಮಿಸಿದಾಗ,

	2. ನ್ಯಾಯಾಲಯವೇ ಅಪ್ರಾಪ್ತ ವಯಸ್ಕನ ಹೊಣೆಹೊತ್ತಾಗ,

	3. ಅಪ್ರಾಪ್ತ ವಯಸ್ಕ ಹುಡುಗಿಯಾಗಿದ್ದು, ಅವಳ ಮದುವೆಯಾದಾಗ,
(ಎಸ್.ಎನ್.ಎಂ.ಯು.)
ಪರಿಷ್ಕರಣೆ : ಆರ್ ಶೈಲೇಶ್

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ